ಬೌದ್ಧಧರ್ಮವನ್ನು ಅಧ್ಯಯನ ಮಾಡುವುದರ ಉದ್ದೇಶವೇನು?

ನಾವು ಧ್ಯಾನದ ಬಗ್ಗೆ ಬೌದ್ಧ ಧರ್ಮದಲ್ಲಿ ಮಾತನಾಡುವಾಗ, ನಾವು ಒಂದು ನಿರ್ದಿಷ್ಟವಾದ ವಿಷಯದ ಬಗ್ಗೆ ಮಾತನಾಡುತ್ತೇವೆ. ಇತ್ತೀಚಿನ ದಿನಗಳಲ್ಲಿ, ನಾವು “ಧ್ಯಾನ” ದ ಬಗ್ಗೆ ಎಲ್ಲಾ ರೀತಿಯ ಸ್ಥಳಗಳಲ್ಲಿ ಕೇಳುತ್ತೇವೆ, ಏಕೆಂದರೆ ಇದು ಸಾಕಷ್ಟು ಪ್ರಸಿದ್ಧಿಯನ್ನು ಪಡೆದಿದ್ದು, ಬಹಳಷ್ಟು ಜನರು ಇದನ್ನು ವಿಶ್ರಾಂತಿಗಾಗಿ ಮತ್ತು ಇತರ ಸಂಬಂಧಿತ ವಿಷಯಗಳಿಗಾಗಿ ಬಳಸುತ್ತಿದ್ದಾರೆ. ಆದರೆ, ವಾಸ್ತವದಲ್ಲಿ ಧ್ಯಾನವನ್ನು ಅಭ್ಯಾಸ ಮಾಡುವುದರ ಬಗ್ಗೆ ಮಾತನಾಡುವುದಾದರೆ, ಹೆಚ್ಚಿನ ಜನರಿಗೆ ಏನು ಮಾಡಬೇಕೆಂದೇ ತಿಳಿದಿರುವುದಿಲ್ಲ. ನಾವು ಶಾಂತವಾಗಿ ಕುಳಿತಿರಬೇಕು ಎಂಬ ಕಲ್ಪನೆ ಇದೆ: ಆದರೆ ಅದರ ನಂತರ ಏನು ಮಾಡಬೇಕು? ಉಸಿರಾಟದ ಮೇಲೆ ಕೇಂದ್ರೀಕರಿಸುವುದು ಮತ್ತು ದಯಾಮಯಿ ಆಲೋಚನೆಗಳನ್ನು ಯೋಚಿಸುವುದನ್ನು ಹೊರತುಪಡಿಸಿ ಬೇರೆಯೇನಾದರೂ ಮಾಡಬೇಕೇ?

ಸಂಸ್ಕೃತದಲ್ಲಿ, ಧ್ಯಾನಕ್ಕಾಗಿ ಇರುವ ಅದವು, ‘ಒಂದು ವಿಷಯವನ್ನು ವಾಸ್ತವಕ್ಕೆ ಕರೆತರುವ’ ಎಂದು ಅರ್ಥೈಸುತ್ತದೆ. ಟಿಬೆಟಿಯನ್ನರು, ಇದನ್ನು ‘ಒಂದು ನಿರ್ದಿಷ್ಟ ಅಭ್ಯಾಸವನ್ನು ನಿರ್ಮಿಸುವ’ ಅರ್ಥವನ್ನು ನೀಡುವ ಪದಕ್ಕೆ ಅನುವಾದಿಸಿದ್ದಾರೆ. ನಾವು ಒಂದು ಅಭ್ಯಾಸವನ್ನು ಬೆಳೆಸಿಕೊಂಡಾಗ, ನಾವು ಅದನ್ನು ನಮ್ಮ ಒಂದು ಭಾಗವಾಗಿ ಮಾಡಿಕೊಳ್ಳುತ್ತೇವೆ ಮತ್ತು ಧ್ಯಾನದ ವಿಷಯದಲ್ಲಿ ನಾವು ಇದನ್ನೇ ಸಾಧಿಸಲು ಪ್ರಯತ್ನಿಸುತ್ತೇವೆ. ನಮ್ಮೊಳಗೆ ಪ್ರಯೋಜನಕಾರಿಯಾದ ಬದಲಾವಣೆಯನ್ನು ಮಾಡಲು ನಾವು ಬಯಸುತ್ತೇವೆ. ನಾವು ಮೊದಲು ಕೇಳಬೇಕಾದ ಪ್ರಶ್ನೆಯೆಂದರೆ, ನಾವು ಏಕೆ ಬದಲಾಗಲು ಬಯಸುತ್ತೇವೆ? ಸಾಮಾನ್ಯವಾಗಿ ಇದರ ಉತ್ತರವು, ನಾವು ನಮ್ಮ ಜೀವನವನ್ನು ನಡೆಸುವ ರೀತಿಯಲ್ಲಿ ಅಥವಾ ನಾವು ಅನುಭವಿಸುವ ರೀತಿಯಲ್ಲಿ ಅಥವಾ ಇತರ ಜನರೊಂದಿಗೆ ಅಥವಾ ನಮ್ಮ ಕೆಲಸದೊಂದಿಗೆ ನಾವು ಸಂಬಂಧ ಹೊಂದುವ ರೀತಿಯ ಬಗ್ಗೆ ನಾವು ಸಂತೋಷವಾಗಿಲ್ಲ ಎನ್ನುವುದಾಗಿರುತ್ತದೆ. ಇದು ಎಂದಿಗೂ ಮುಗಿಯದ ಪಟ್ಟಿಯಾಗಿರುತ್ತದೆ, ಆದರೆ ನಮ್ಮಲ್ಲಿ ಹೆಚ್ಚಿನವರ ಗುರಿಯು ನಮ್ಮ ಜೀವನವನ್ನು ಸುಧಾರಿಸುವುದಾಗಿರುತ್ತದೆ. 

ಸಮಸ್ಯೆಗಳಿಂದ ತಪ್ಪಿಸಿಕೊಳ್ಳುವ ಬದಲು ಅವುಗಳನ್ನು ನಿಭಾಯಿಸುವುದು 

ಇದು ಒಂದು ಪ್ರಮುಖ ಅಂಶವಾಗಿರುತ್ತದೆ: ನಾವು ಬದಲಾಗಲು ಮತ್ತು ಸುಧಾರಿತರಾಗಲು ಬಯಸುತ್ತೇವೆ. ಧ್ಯಾನದ ಮೂಲಕ ನಾವು ಒಂದು ಕಾಲ್ಪನಿಕ ಜಗತ್ತಿಗೆ ತಪ್ಪಿಸಿಕೊಳ್ಳಲು ಬಯಸುವುದಿಲ್ಲ; ಹೀಗೆ ಮಾಡಲು, ಡ್ರಗ್ಸ್ ಮತ್ತು ಮಧ್ಯಪಾನದಂತಹ ಇತರ ಸಾಕಷ್ಟು ವಿಧಾನಗಳಿವೆ, ಬೇಕಾದರೆ ನಾವು ಅವನ್ನು ಬಳಸಬಹುದು. ನಾವು ಯಾವುದರ ಬಗ್ಗೆಯೂ ಯೋಚಿಸದೇ ಇರಲು, ದಿನವಿಡೀ ಸಂಗೀತವನ್ನು ಕೇಳಬಹುದು. ಸಾಮಾನ್ಯವಾಗಿ, ನಾವು ಅಂತಹ ವಿಷಯಗಳ ಪ್ರಭಾವಕ್ಕೆ ಒಳಗಾದಾಗ, ನಮ್ಮ ಸಮಸ್ಯೆಗಳು ಗಂಭೀರವಾಗಿರುವಂತೆ ಅಥವಾ ನೈಜವಾಗಿರುವಂತೆ ತೋರುವುದಿಲ್ಲ. ಆದರೆ ಈ ಸಮಸ್ಯೆಗಳು ಯಾವಾಗಲೂ ಹಿಂದಿರುಗುತ್ತವೆ, ಏಕೆಂದರೆ ನಾವು ಅವುಗಳನ್ನು ಎದುರಿಸಲು ಕಲಿತಿರುವುದಿಲ್ಲ. ಬಹಳಷ್ಟು ಜನರು, ಧ್ಯಾನವನ್ನು ಔಷಧಿಯಂತೆ ಬಳಸುತ್ತಾರೆ, ಆದರೆ ಇದು ದೀರ್ಘಾವಧಿಯಲ್ಲಿ ಸಹಾಯ ಮಾಡುವುದಿಲ್ಲ. ಒಂದು ರೀತಿಯ ಬೌದ್ಧ ಡಿಸ್ನಿಲ್ಯಾಂಡ್‌ನಲ್ಲಿ ಇರುವಂತೆ ನಾವು ಗಂಟೆಗಳನ್ನು ಬಾರಿಸಬಹುದು ಮತ್ತು ಡೋಲು ಬಾರಿಸಬಹುದು, ಆದರೆ ಇದರಿಂದ ನಮ್ಮಲ್ಲಿ ಯಾವುದೇ ಬದಲಾವಣೆಗಳಾಗುವುದಿಲ್ಲ: ಇದು ಕೇವಲ ತಪ್ಪಿಸಿಕೊಳ್ಳುವುದಾಗಿರುತ್ತದೆಯಷ್ಟೆ. 

ಆದರೆ ನಾವು ಬೌದ್ಧ ಸಂಪ್ರದಾಯದಲ್ಲಿ ಉದ್ದೇಶಿಸಿರುವ ರೀತಿಯಲ್ಲಿ ಧ್ಯಾನವನ್ನು ಅಭ್ಯಾಸ ಮಾಡಿದರೆ, ನಾವು ನಮ್ಮ ಸಮಸ್ಯೆಗಳಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುವುದಿಲ್ಲ, ಬದಲಿಗೆ ಅವುಗಳನ್ನು ಎದುರಿಸಲು ಮತ್ತು ಜಯಿಸಲು ಪ್ರಯತ್ನಿಸುತ್ತೇವೆ. ಇದು ನಿಜವಾಗಿಯೂ ಬಹಳಾ ಧೈರ್ಯಶಾಲಿಯಾದ ಹೆಜ್ಜೆಯಾಗಿರುತ್ತದೆ ಮತ್ತು ಇದಕ್ಕಾಗಿ ಸಾಕಷ್ಟು ಪ್ರಯತ್ನದ ಅಗತ್ಯವಿರುತ್ತದೆ, ಏಕೆಂದರೆ ಇದು ಸುಲಭವಾಗಿರುವುದಿಲ್ಲ. ಇದು ವಿನೋದಮಯವಾಗಿರುವುದಿಲ್ಲ ಎಂಬ ಅರಿವಿನೊಂದಿಗೆ ನಾವು ಸಿದ್ಧರಾಗಿರಬೇಕು. ಇದನ್ನು ದೈಹಿಕ ತರಬೇತಿಗೆ ಹೋಲಿಸಬಹುದು, ಅದು ಕಠಿಣವಾಗಿರುತ್ತದೆ ಮತ್ತು ನಮ್ಮ ಸ್ನಾಯುಗಳು ನೋಯುತ್ತವೆ, ಆದರೆ ಬಲವಾಗಿರಲು ಮತ್ತು ಆರೋಗ್ಯದಿಂದಿರಲು ನಾವು ಈ ಕಷ್ಟಗಳನ್ನು ಸಹಿಸಿಕೊಳ್ಳಲು ಸಿದ್ಧರಾಗಿರುತ್ತೇವೆ.   

ಧ್ಯಾನಕ್ಕಾಗಿಯೂ ಇದೇ ಅನ್ವಯವಾಗುತ್ತದೆ, ನಾವು ದೇಹದ ಬದಲಿಗೆ ಮನಸ್ಸಿನ ಮೇಲೆ ಕೆಲಸ ಮಾಡುತ್ತಿರುತ್ತೇವೆ ಅಷ್ಟೆ. ಬೌದ್ಧಧರ್ಮದ ಕೆಲವು ರೂಪಗಳಲ್ಲಿ, ಸಮರ ಕಲೆಗಳಂತಹ ದೇಹದ ಮೇಲೆ ಕೆಲಸ ಮಾಡುವ ಧ್ಯಾನದ ಸಂಯೋಜನೆಯನ್ನು ನೋಡಬಹುದು, ಆದರೆ ಇದು ಟಿಬೆಟಿನ ಸಂಪ್ರದಾಯದಲ್ಲಿ ಕಂಡುಬರುವುದಿಲ್ಲ. ದೇಹಕ್ಕೆ ತರಬೇತಿ ನೀಡುವುದರಲ್ಲಿ ಯಾವುದೇ ತಪ್ಪಿಲ್ಲ, ಇದು ಬಹಳಾ ಉಪಯುಕ್ತವಾಗಿರುತ್ತದೆ; ಆದರೆ ಇಲ್ಲಿ ಮನಸ್ಸಿನ ಮೇಲೆ ಮುಖ್ಯವಾಗಿ ಗಮನಹರಿಸಲಾಗಿದೆ, ಕೇವಲ ನಮ್ಮ ಬುದ್ಧಿ ಮಾತ್ರವಲ್ಲದೆ, ನಮ್ಮ ಭಾವನೆಗಳು ಮತ್ತು ಹೃದಯದ ಮೇಲೆಯೂ ಗಮನಹರಿಸಲಾಗಿದೆ. ಮಹಾನ್ ಬೌದ್ಧ ಗುರುಗಳು, ಬೌದ್ಧ ಆಚರಣೆಯನ್ನು ಪ್ರಾರಂಭಿಸುವಾಗ, ಅತ್ಯಂತ ಮೂಲಭೂತ ವಿಷಯವು ಮನಸ್ಸನ್ನು ಪಳಗಿಸುವುದಾಗಿರುತ್ತದೆ ಎಂದು ಒತ್ತಿಹೇಳಿದರು, ಏಕೆಂದರೆ ನಾವು ವರ್ತಿಸುವ, ಕಾರ್ಯನಿರ್ವಹಿಸುವ ಮತ್ತು ಇತರರೊಂದಿಗೆ ಸಂವಹನ ನಡೆಸುವ ವಿಧಾನವು ನಮ್ಮ ಮನಸ್ಥಿತಿಯಿಂದ ನಿಯಂತ್ರಿತವಾಗಿರುತ್ತವೆ. 

ಪ್ರಾಮಾಣಿಕವಾಗಿ ಆತ್ಮಾವಲೋಕನ ಮಾಡುವುದು 

ನಮ್ಮ ಜೀವನದಲ್ಲಿ ತೊಂದರೆಗಳಿವೆ ಎಂದು ನಾವು ಗುರುತಿಸುತ್ತೇವೆ ಮತ್ತು ಇದರ ಮೂಲವು ನಮ್ಮ ಸ್ವಂತ ಮನಸ್ಸಿನಲ್ಲಿನ ಅತೃಪ್ತಿಯಾಗಿದೆ ಎಂದು ನಾವು ಗಮನಿಸುತ್ತೇವೆ. ನಾವು ಪ್ರಾಮಾಣಿಕವಾಗಿ ನಮ್ಮನ್ನು ಪರೀಕ್ಷಿಸಿಕೊಂಡರೆ, ನಾವು ಕೋಪದಿಂದ ಹಿಡಿದು ದುರಾಶೆಯವರೆಗೆ, ಸ್ವಾರ್ಥ, ಅಸೂಯೆ, ಬಾಂಧವ್ಯ, ದುರಹಂಕಾರ, ನಿಷ್ಕಪಟತೆಗಳಂತಹ ಬಹಳಷ್ಟು ಗೊಂದಲಮಯ ಭಾವನೆಗಳನ್ನು ಹೊಂದಿದ್ದೇವೆ ಮತ್ತು ಇದೊಂದು ಮುಗಿಯದ ಪಟ್ಟಿಯಾಗಿದೆ ಎಂದು ಗಮನಿಸುತ್ತೇವೆ. ನಾವು ಇನ್ನೂ ಆಳವಾಗಿ ಹೋದರೆ, ಜೀವನದ ಉದ್ದೇಶವೇನು ಎಂಬುದರ ಬಗೆಗಿರುವ ಒಂದು ರೀತಿಯ ಅಭದ್ರತೆ ಮತ್ತು ಗೊಂದಲವನ್ನು ಕಾಣಬಹುದು. ಈ ಗೊಂದಲಮಯ ಭಾವನೆಗಳು, ನಮ್ಮ ಮನಸ್ಥಿತಿಯನ್ನು ನಿಯಂತ್ರಿಸುತ್ತವೆ ಮತ್ತು ನಮಗೆ ಮತ್ತು ಇತರರಿಗೆ ಸಮಸ್ಯೆಗಳನ್ನು ಸೃಷ್ಟಿಸುವ ರೀತಿಯಲ್ಲಿ, ಇತರರೊಂದಿಗೆ ವರ್ತಿಸಲು, ಮಾತನಾಡಲು ಮತ್ತು ಸಂಬಂಧಿಸುವಂತೆ ಮಾಡುತ್ತವೆ. ನಾವು ಒಬ್ಬಂಟಿಯಾಗಿರುವಾಗಲೂ, ನಮ್ಮ ಮನಸ್ಸು ಅಹಿತಕರವಾಗಿರುತ್ತದೆ ಮತ್ತು ಎಲ್ಲಾ ರೀತಿಯ ಗೊಂದಲದ ಆಲೋಚನೆಗಳೊಂದಿಗೆ ಕೂಡಿರುತ್ತದೆ. ಸರಳವಾಗಿ ಹೇಳುವುದಾದರೆ, ನಾವು ನಿಜವಾಗಿಯೂ ಸಂತೋಷವಾಗಿರುವುದಿಲ್ಲ. 

ಧ್ಯಾನವು, ಈ ಪರಿಸ್ಥಿತಿಯಲ್ಲಿ ಬದಲಾವಣೆಯನ್ನು ತರಲು ಸಹಾಯ ಮಾಡುವ ಉದ್ದೇಶವನ್ನು ಹೊಂದಿರುತ್ತದೆ. ನಾವು ಯಾವುದರ ಬಗ್ಗೆಯೂ ಯೋಚಿಸದಂತೆ ಇರಲು, ಅಮಲು ಪದಾರ್ಥಗಳನ್ನು ಸೇವಿಸುವಂತೆ ಇದಾಗಿರುವುದಿಲ್ಲ. ಕೆಲವರು ಧ್ಯಾನವನ್ನು ಈ ರೀತಿಯಾಗಿ ನೋಡಿದರೂ ಅದು ನಿಜವಾದ ಪರಿಹಾರವಾಗಿರುವುದಿಲ್ಲ. ಸುಮ್ಮನೆ ಕಣ್ಣು ಮುಚ್ಚಿ ಕುಳಿತರೆ, ಎಲ್ಲವನ್ನೂ ದೂರವಿರಿಸಿದರೆ, ತಮ್ಮ ಸಮಸ್ಯೆಗಳೆಲ್ಲ ಹೇಗೋ ಮಾಯವಾಗುತ್ತವೆ ಎಂದು ಅವರು ಭಾವಿಸುತ್ತಾರೆ. ಇದು ಹೀಗೆ ಕೆಲಸ ಮಾಡುವುದಿಲ್ಲ. ಬದಲಿಗೆ, ನಾವು ನಮ್ಮ ಸಮಸ್ಯೆಗಳ ಮೇಲೆ ಸಕ್ರಿಯವಾಗಿ ದಾಳಿ ಮಾಡಬೇಕಾಗಿದೆ. 

ನಿಜವಾದ ಶತ್ರುವನ್ನು ಕಂಡುಹಿಡಿಯುವುದು 

ಆಗಾಗ್ಗೆ, ಬೌದ್ಧ ಸಾಹಿತ್ಯದಲ್ಲಿ, ನಮ್ಮ ಗೊಂದಲದ ಭಾವನೆಗಳನ್ನು ನಮ್ಮ ನಿಜವಾದ ಶತ್ರು ಎಂದು ಕರೆಯುವ ತೀಕ್ಷ್ಣವಾದ ಭಾಷೆಯನ್ನು ಕಾಣಬಹುದು. ಇವುಗಳಿಗೆ ನಾವು ಹೆದರುವಂತಹ ಅಥವಾ ಮತಿವಿಕಲ್ಪಕ್ಕೆ ಒಳಗಾಗುವಂತಹ ದೈತ್ಯರನ್ನಾಗಿ ಪ್ರಸ್ತುತಪಡಿಸುವುದು ಇದರ ಉದ್ದೇಶವಾಗಿರುವುದಿಲ್ಲ. ಬದಲಾಗಿ, ನಾವು ಇವುಗಳ ಮೇಲೆ ಕೆಲಸ ಮಾಡಬೇಕಾಗುತ್ತದೆ ಎಂದು ನಾವು ಗುರುತಿಸುತ್ತೇವೆ. ನಮ್ಮಲ್ಲಿ ಬಹಳ ಸುಂದರವಾದ ಬೌದ್ಧ ಗ್ರಂಥಗಳಿದ್ದು, ಈ ರೀತಿಯ ತೊಂದರೆಗಳನ್ನು ಉಂಟುಮಾಡುವವರ ಬಗ್ಗೆ ಹೀಗೆ ಮಾತನಾಡುತ್ತವೆ, "ನಿನ್ನ ಸಹವಾಸ ಸಾಕು, ನೀನು ನನಗೆ ಬಹಳಾ ತೊಂದರೆಗಳನ್ನು ಮತ್ತು ಸಮಸ್ಯೆಗಳನ್ನು ಉಂಟುಮಾಡಿರುವೆ. ಇಲ್ಲಿಗೆ ನಿನ್ನ ಸಮಯ ಮುಗಿದಿದೆ.” ಈ ರೀತಿಯಾಗಿ ನಾವು ನಮ್ಮ ತೋಳುಗಳನ್ನು ಕೊಡವಿಕೊಂಡು, ನಮ್ಮ ಮನಸ್ಸನ್ನು ಬದಲಾಯಿಸಲು ಕುಳಿತುಕೊಳ್ಳಲು ಪ್ರಯತ್ನಿಸುತ್ತೇವೆ. ಇದೇ ಧ್ಯಾನವಾಗಿರುತ್ತದೆ. 

ಸರಳವಾಗಿ ಹೇಳುವುದಾದರೆ, ಧ್ಯಾನವು ಪ್ರಯೋಜನಕಾರಿಯಾದ ಅಭ್ಯಾಸಗಳನ್ನು ಬೆಳೆಸಿಕೊಳ್ಳುವ ಮತ್ತು ಕೆಟ್ಟ ಅಭ್ಯಾಸಗಳನ್ನು ಬದಲಾಯಿಸುವ ವಿಧಾನವಾಗಿರುತ್ತದೆ. ಇವುಗಳು ನಾವು ಯೋಚಿಸುವ ರೀತಿ, ನಾವು ಅನುಭವಿಸುವ ರೀತಿ ಮತ್ತು ನಾವು ವಿಷಯಗಳಿಗೆ ಭಾವನಾತ್ಮಕವಾಗಿ ಪ್ರತಿಕ್ರಿಯಿಸುವ ರೀತಿಯ ಅಭ್ಯಾಸಗಳಾಗಿರಬಹುದು. ಇದಕ್ಕಾಗಿ ತರಬೇತಿ ಮತ್ತು ಪುನರಾವರ್ತನೆಯ ಅಗತ್ಯವಿರುತ್ತದೆ - ಇದೊಂದು ವೈಜ್ಞಾನಿಕ ವಿಧಾನವಾಗಿರುತ್ತದೆ. ನಾವು ಅಥ್ಲೆಟಿಕ್ಸ್‌ಗಾಗಿ ತರಬೇತಿ ಪಡೆಯುವಾಗ ಅಥವಾ ಸಂಗೀತ ವಾದ್ಯವನ್ನು ನುಡಿಸುವಾಗ ಅಥವಾ ನೃತ್ಯವನ್ನು ಅಭ್ಯಾಸ ಮಾಡುವಾಗ, ಆರಂಭದಲ್ಲಿ ಅವು ಬಹಳಾ ಕೃತಕವಾಗಿ ಭಾಸವಾಗುತ್ತವೆಯೋ, ಹಾಗೆಯೇ ಇದರ ಅನುಭವವಾಗಿರುತ್ತದೆ. ಆದರೆ ಒಮ್ಮೆ ಒಂದು ವಿಷಯಕ್ಕೆ ಪರಿಚಿತರಾದ ನಂತರ, ಅದು ನಮಗೆ ಬಹಳಾ ಸಹಜವೆನಿಸುತ್ತದೆ. ಇದು ನಮ್ಮ ಮನಸ್ಸು ಮತ್ತು ಮನೋಭಾವನೆಗಳು ಮತ್ತು ಭಾವನೆಗಳ ವಿಷಯದಲ್ಲೂ ನಿಜವಾಗಿರುತ್ತದೆ. 

ಬದಲಾವಣೆ ಸಾಧ್ಯವೇ

ಈಗ, ಒಂದು ದೊಡ್ಡ ಪ್ರಶ್ನೆ ಉದ್ಭವಿಸುತ್ತದೆ. ನಾವು ನಿಜವಾಗಿಯೂ ಬದಲಾಗಬಹುದೇ? ವಾಸ್ತವದಲ್ಲಿ, ನಮ್ಮನ್ನು ಬದಲಾಯಿಸಿಕೊಳ್ಳುವುದಕ್ಕಾಗಿ ಕೆಲಸ ಮಾಡಲು, ಅದು ನಿಜವಾಗಿಯೂ ಸಾಧ್ಯ ಎಂದು ನಾವು ಮೊದಲು ಮನವರಿಕೆ ಮಾಡಿಕೊಳ್ಳಬೇಕು. “ನಾನು ಇರುವುದೇ ಹೀಗೆ; ಇದನ್ನು ಬದಲಾಯಿಸಲು ಸಾಧ್ಯವಿಲ್ಲ, ಆದ್ದರಿಂದ ನಾನು ಹೀಗೇ ಬದುಕಬೇಕು.” ಅಥವಾ “ನಾನೊಬ್ಬ ಕೋಪದಿಂಧ ಕೂಡಿದ ವ್ಯಕ್ತಿ, ನನಗೆ ಕೆಟ್ಟ ಕೋಪವಿದೆ, ನಾನು ಇರುವುದೇ ಹೀಗೆ”, ಎಂದು ಹೇಳುವ ಜನರನ್ನು ನಾವು ಆಗಾಗ್ಗೆ ನೋಡುತ್ತೇವೆ. ನಾವು ಒಂದು ವಿಷಯದೊಂದಿಗೆ ಇಷ್ಟು ಬಲವಾಗಿ ಗುರುತಿಸಿಕೊಂಡರೆ, ಸಹಜವಾಗಿ ಅದನ್ನು ಬದಲಾಯಿಸಲು ಕಷ್ಟವಾಗುತ್ತದೆ. 

ನಮ್ಮನ್ನು ನಾವು ಪ್ರಾಮಾಣಿಕವಾಗಿ ನೋಡಬೇಕು. ನಾವು ಕೆಲವು ವಿಷಯಗಳೊಂದಿಗೆ ಏಕೆ ಗುರುತಿಸಿಕೊಳ್ಳುತ್ತೇವೆ? ನಾವು ನಿಜವಾಗಿಯೂ ಕೋಪಗೊಂಡ ವ್ಯಕ್ತಿಯಾಗಿದ್ದರೆ, ನಾವು ಯಾವಾಗಲೂ ಕೋಪಗೊಂಡಿರಬೇಕಲ್ಲವೇ? ನಾವು ಇತರರನ್ನು ದೂಷಿಸಲು ಸಹ ಶುರುಮಾಡಬಹುದು: ನನ್ನ ತಂದೆ-ತಾಯಿ ಹೀಗೆ ಅಥವಾ ಹಾಗೆ ಮಾಡಿದ್ದರಿಂದ ನಾನು ಕೋಪದಿಂದ ಕೂಡಿದ್ದೇನೆ. ಇದು ಯಾವುದೇ ರೀತಿಯಲ್ಲಿ ಸಹಾಯಕವಾಗಿರುವುದಿಲ್ಲ. ನಾವು ಆಳವಾಗಿ ನೋಡಿದರೆ, ಈ ಭಾವನೆಗಳು ಎಲ್ಲಿಂದ ಉದ್ಭವಿಸುತ್ತವೆ ಎಂಬುದನ್ನು ನಾವು ಕಂಡುಹಿಡಿಯಬಹುದು. "ಕೋಪಗೊಳ್ಳಬೇಡ, ದುರಾಸೆ ಪಡಬೇಡ, ಸ್ವಾರ್ಥಿಯಾಗಬೇಡ" ಎಂದು ಪ್ರತಿದಿನ ನಮಗೆ ನಾವೇ ಹೇಳಿಕೊಂಡರೂ, ಅದನ್ನು ನಿಲ್ಲಿಸುವುದು ತುಂಬಾ ಕಷ್ಟ, ಅಲ್ಲವೇ? ಆದ್ದರಿಂದ ನಾವು ಭಾವನಾತ್ಮಕವಾಗಿ ಭಾವಿಸುವ ರೀತಿಯನ್ನು ಬದಲಾಯಿಸಲು ಅನುವು ಮಾಡಿಕೊಡುವ ವಿಧಾನವನ್ನು ನಾವು ಹುಡುಕಬೇಕಾಗಿದೆ. 

ನಮ್ಮ ವರ್ತನೆ ಎಲ್ಲದರ ಮೇಲೆ ಪರಿಣಾಮ ಬೀರುತ್ತದೆ 

ನಮ್ಮ ಭಾವನಾತ್ಮಕ ಸ್ಥಿತಿಗೆ ಆಧಾರವಾಗಿರುವುದನ್ನು ನಾವು ನಮ್ಮ "ವರ್ತನೆ" ಎಂದು ಕರೆಯಬಹುದು ಎಂದು ಬೌದ್ಧಧರ್ಮವು ಹೇಳುತ್ತದೆ. ಇದು, ನಾವು ವಿಷಯಗಳನ್ನು ನೋಡುವ ರೀತಿಯಾಗಿರುತ್ತದೆ. ನಾವು ನಮ್ಮ ಕೆಲಸವನ್ನು ಕಳೆದುಕೊಳ್ಳುತ್ತೇವೆ ಎಂದು ಊಹಿಸೋಣ. ನಾವು ಇದನ್ನು ಒಂದು ವಿಪತ್ತು ಎಂದು ಪರಿಗಣಿಸಬಹುದು ಮತ್ತು ನಂತರ ನಾವು ಕೋಪ ಮತ್ತು ಖಿನ್ನತೆಗೆ ಒಳಗಾಗುತ್ತೇವೆ. ಏಕೆ? ಏಕೆಂದರೆ, ಆ ಸಮಯದಲ್ಲಿ, ಇದು ಇಡೀ ಜಗತ್ತಿನಲ್ಲೇ ಸಂಭವಿಸಬಹುದಾದ ಅತ್ಯಂತ ಕೆಟ್ಟ ವಿಷಯ ಎಂದು ನಾವು ಭಾವಿಸುತ್ತೇವೆ. 

ನಾವು ನಮ್ಮ ಕೆಲಸವನ್ನು ಕಳೆದುಕೊಂಡಿದ್ದೇವೆ – ಇದು ಸತ್ಯ. ನಾವು ಅದನ್ನು ಬದಲಾಯಿಸಲು ಸಾಧ್ಯವಿಲ್ಲ. ಆ ಕೆಲಸದ ನಷ್ಟವನ್ನು ನಾವು ಪರಿಗಣಿಸುವ ರೀತಿಯನ್ನು ನಾವು ಬದಲಾಯಿಸಬಹುದು ಮತ್ತು ವರ್ತನೆಯು ಇದನ್ನೇ ಅರ್ಥೈಸುತ್ತದೆ. ಆದ್ದರಿಂದ ನಾವು ಅದನ್ನು ವಿಭಿನ್ನವಾಗಿ ನೋಡಲು ಪ್ರಯತ್ನಿಸಬಹುದು - ಈಗ ನಾವು ನಮ್ಮ ಮಕ್ಕಳೊಂದಿಗೆ ಹೆಚ್ಚು ಸಮಯವನ್ನು ಕಳೆಯಬಹುದು ಅಥವಾ ಉದ್ಯೋಗಗಳನ್ನು ಬದಲಾಯಿಸುವ ಬಗ್ಗೆ ಯೋಚಿಸಬಹುದು. ಸರಿ, ಇದು ನಮಗೆ ಆರ್ಥಿಕವಾಗಿ ಸಹಾಯ ಮಾಡದಿರಬಹುದು, ಆದರೆ ಕನಿಷ್ಠಪಕ್ಷ ನಾವು ಅದರ ಬಗ್ಗೆ ಕೆಟ್ಟದಾಗಿ ಭಾವಿಸುವುದಿಲ್ಲ. ಆದ್ದರಿಂದ ನಾವು ವಿಷಯಗಳನ್ನು ಹೇಗೆ ಪರಿಗಣಿಸುತ್ತೇವೆ ಎಂಬುದರ ಬಗ್ಗೆ ನಾವು ಧ್ಯಾನದಲ್ಲಿ ಗಮನಹರಿಸಬಹುದು, ಏಕೆಂದರೆ ಇವು ನಮ್ಮ ಭಾವನೆಗಳ ಮೇಲೆ ಪ್ರಭಾವ ಬೀರುತ್ತವೆ. 

ಕಳೆದ ವಾರ ನನ್ನ ಆತ್ಮೀಯ ಸ್ನೇಹಿತರೊಬ್ಬರು ನಿಧನರಾದರು. ಇದು ಬಹಳಾ ದುಃಖಕರವಾದ ಸಂಗತಿ. ನಾನು ಅದರ ಬಗ್ಗೆ ದುಃಖಿತನಾಗಿರುವೆ – ಅದು ಒಳ್ಳೆಯದೆ; ಅದರಲ್ಲಿ ತಪ್ಪೇನೂ ಇಲ್ಲ. ಅವರ ಸಾವಿನಿಂದ ನನಗೆ ಖಂಡಿತವಾಗಿಯೂ ಸಂತೋಷವಾಗಿಲ್ಲ! ಆದರೆ ಇಲ್ಲಿನ ನನ್ನ ಮನಸ್ಥಿತಿಯೊಂದಿಗೆ ನಾನು ಹೇಗೆ ತಾನೆ ಕೆಲಸ ಮಾಡಬಹುದು? ಅವರು ಸಾಯುವ ಒಂದು ವಾರದ ಮೊದಲು, ಅವರಿಗೆ ಕರೆ ಮಾಡಬೇಕೆಂದು ನನಗೆ ಅನಿಸಿತ್ತು, ಆದರೆ ಅಂತಿಮವಾಗಿ ನಾನು ಹಾಗೆ ಮಾಡಲಿಲ್ಲ. ಅವರು ಸಂಪೂರ್ಣವಾಗಿ ಆರೋಗ್ಯವಂತರಾಗಿದ್ದರು, ಸ್ನಾನ ಮಾಡಲು ಹೋದಾಗ ಹೃದಯಾಘಾತವಾಗಿ, ಶವರ್‌ನಲ್ಲಿ ಸಾವನ್ನಪ್ಪಿದರು. ಇದು ಬಹಳಾ ಅನಿರೀಕ್ಷಿತವಾಗಿದ್ದು, ಹಠಾತ್ ಆಗಿ ಸಂಭವಿಸಿತು. ಸಹಜವಾಗಿ, ಒಂದು ವಾರದ ಹಿಂದೆ ನಾನು ಅವರ ಬಗ್ಗೆ ಯೋಚಿಸಿದಾಗ ನಾನು ಅವರೊಂದಿಗೆ ಮಾತನಾಡಲಿಲ್ಲ ಎಂಬುದರ ಬಗ್ಗೆ ನಾನು ಅಪಾರವಾಗಿ ವಿಷಾದಿಸಬಹುದು, ಅಥವಾ ಅವರು ಸಾವನಪ್ಪುತ್ತಾರೆ ಎಂದು ನನಗೆ ತಿಳಿದಿದ್ದರೆ ನಾನು ಅವರಿಗೆ ಏನೆಲ್ಲಾ ಹೇಳಲು ಇಚ್ಛಿಸುತ್ತಿದ್ದೆ ಎಂದು ಯೋಚಿಸುತ್ತಾ ನನ್ನ ಮೇಲೆ ನಾನೇ ಕೋಪಗೊಳ್ಳಬಹುದು. ಹಾಗೆ ಯೋಚಿಸಿದ್ದರೆ ನಾನು ಭಾವನಾತ್ಮಕವಾಗಿ ಇನ್ನಷ್ಟು ಬೇಸರಗೊಳ್ಳುತ್ತಿದ್ದೆ. 

ಬದಲಾಗಿ, ನಾವು ಒಟ್ಟಿಗೆ ಕಳೆದ ಎಲ್ಲಾ ಸಂತೋಷದ ಸಮಯಗಳನ್ನು ಮತ್ತು ನಾವು ಹಂಚಿಕೊಂಡ ಬಹಳಾ ಅದ್ಭುತವಾದ ವಿಷಯಗಳನ್ನು ನಾನು ನೆನಪಿಸಿಕೊಂಡೆ - ನಾವು 35 ವರ್ಷಗಳಿಂದ ಸ್ನೇಹಿತರಾಗಿದ್ದೆವು - ಮತ್ತು ಅಂತಹ ಅದ್ಭುತ ವ್ಯಕ್ತಿಯನ್ನು ನಾನು ಬಹಳಾ ಹತ್ತಿರದಿಂದ ತಿಳಿದಿರುವುದು ನನ್ನ ಭಾಗ್ಯ ಎಂದು ಅರಿತುಕೊಂಡೆ. ಬಹುಶಃ, ನನಗೆ ಗೊತ್ತಿರುವ ಪಾಶ್ಚಿಮಾತ್ಯರಲ್ಲಿ ಅವರು ಅತ್ಯಂತ ಪ್ರಾಮಾಣಿಕವಾದ ಮತ್ತು ಅಧಿಕೃತವಾದ ಧರ್ಮಾಚರಣೆಗಾರರಾಗಿದ್ದರು. ನನ್ನ ಸ್ವಂತ ಆಚರಣೆಯನ್ನು ಇನ್ನಷ್ಟು ಛಲದಿಂದ ಮುಂದುವರಿಸಲು ನನಗೆ ಅವರೊಂದು ಉತ್ತಮ ಸ್ಫೂರ್ತಿ ಎಂದು ಪರಿಗಣಿಸುತ್ತೇನೆ. ಅವರು ತಮ್ಮ ಹೆಂಡತಿಯನ್ನು ನೋಡಿಕೊಂಡಂತೆಯೇ, ಈಗ ನಾನು ಹಾಗೆ ಮಾಡುತ್ತಿದ್ದೇನೆ ಎಂದು ಅವರಿಗೆ ತಿಳಿದಿದ್ದರೆ ಅವರು ಬಹಳಾ ಸಾಂತ್ವನಗೊಳ್ಳುತ್ತಾರೆ ಎಂದು ನನಗೆ ತಿಳಿದಿದೆ ಮತ್ತು ನಾನು ಅಂತೆಯೇ ಮಾಡುತ್ತಿದ್ದೇನೆ. 

ಇದು ಧ್ಯಾನದ ಫಲಿತಾಂಶವಾಗಿದೆ. ನೀವು ಅಲೌಕಿಕ ಶಕ್ತಿಗಳನ್ನು ಅಥವಾ ವಿಲಕ್ಷಣವಾದದ್ದನ್ನು ಪಡೆಯುವುದಿಲ್ಲ. ನೀವು ಕಷ್ಟದ ಪರಿಸ್ಥಿತಿಯನ್ನು ಎದುರಿಸಿದಾಗ ಮತ್ತು ನೀವು ನಕಾರಾತ್ಮಕವಾದ, ಅತೃಪ್ತಿಕರ ಮನಸ್ಥಿತಿಗೆ ಒಳಗಾಗುವುದನ್ನು ನೀವು ಕಂಡುಕೊಂಡಾಗ, ಮೊದಲನೆಯದಾಗಿ ನೀವು ಹಾಗೆ ಮುಂದುವರಿದರೆ, ಅದು ವಿಷಯಗಳನ್ನು ಇನ್ನಷ್ಟು ಹದಗೆಡಿಸುತ್ತದೆ ಎಂದು ಅರಿತುಕೊಳ್ಳಲು ಅದು ನಿಮಗೆ ಸಾಕಷ್ಟು ತಿಳುವಳಿಕೆಯನ್ನು ನೀಡುತ್ತದೆ. ಈ ಕಷ್ಟಕರ ಸಂದರ್ಭಗಳನ್ನು ಅರ್ಥಮಾಡಿಕೊಳ್ಳುವ ಉತ್ತಮ ವಿಧಾನಗಳನ್ನು ನಾವು ಅರ್ಥಮಾಡಿಕೊಳ್ಳುತ್ತೇವೆ ಮತ್ತು ಸಾಕಷ್ಟು ತರಬೇತಿಯೊಂದಿಗೆ, ನಾವು ವಿಷಯಗಳನ್ನು ನೋಡುವ ವಿಧಾನವನ್ನು ಸಂಪೂರ್ಣವಾಗಿ ಬದಲಾಯಿಸಲು ಸಾಧ್ಯವಾಗುತ್ತದೆ. ನಾವು ದುಃಖವನ್ನು ಇನ್ನೂ ಅನುಭವಿಸಬಹುದು, ನನ್ನ ಸ್ನೇಹಿತನನ್ನು ಕಳೆದುಕೊಂಡಾಗ ನಾನು ಅನುಭವಿಸಿದಂತೆ, ಆದರೆ ಆ ದುಃಖವನ್ನು ಮೃದುಗೊಳಿಸಲು ನಾವು ಒಂದು ನಿರ್ದಿಷ್ಟ ಸಂತೋಷವನ್ನು ಸೇರಿಸುವ ಆಲೋಚನೆಗಳನ್ನು ಸಂಯೋಜಿಸಲು ಸಮರ್ಥರಾಗಿರುತ್ತೇವೆ.  

ನಮ್ಮ ಸ್ವಂತ ಸಾಮರ್ಥ್ಯದ ಬಗ್ಗೆ ಮನವರಿಕೆಗೊಳ್ಳುವುದು 

ಹೀಗಾಗಿ ನಾವು ಈ ಪ್ರಶ್ನೆಯನ್ನು ಕೇಳುತ್ತೇವೆ, ನಾವು ವಿಷಯಗಳನ್ನು ನೋಡುವ ರೀತಿಯನ್ನು ಬದಲಾಯಿಸಲು ನಾವು ಸಮರ್ಥರಾಗಿದ್ದೇವೆಯೇ? ಇದರ ಉತ್ತರ ಹೌದು. ಮಕ್ಕಳಾಗಿರುವಾಗ ನಮಗೆ ಬಹಳಾ ಆಸಕ್ತಿದಾಯಕವಾಗಿ ಮತ್ತು ಅದ್ಭುತವಾಗಿ ಕಂಡ ವಸ್ತುಗಳು ಈಗ ಮೂರ್ಖ ಮತ್ತು ನೀರಸವೆನಿಸುತ್ತವೆ. ನಮಗೆ ವಯಸ್ಸಾದಂತೆ, ನಮ್ಮ ವರ್ತನೆಗಳು ಸಾಕಷ್ಟು ಬದಲಾಗುತ್ತವೆ. ಇನ್ನಷ್ಟೂ ಬದಲಾವಣೆ ಹೊಂದಲು ನಮಗೆ ಸಾಧ್ಯವಿದೆ ಎಂದು ನಮಗೆ ಒಮ್ಮೆ ಮನವರಿಕೆಯಾದಾಗ, ಹಾಗೆ ಮಾಡಲು ನಾವು ಕೆಲವು ವಿಧಾನಗಳನ್ನು ಕಲಿಯಬಹುದಾಗಿದೆ. ಇದರಲ್ಲಿ ಮೂರು ಹಂತಗಳಿವೆ: 

  • ಸರಿಯಾದ ಮಾಹಿತಿಯನ್ನು ಪಡೆಯುವುದು - ಹೆಚ್ಚು ಪ್ರಯೋಜನಕಾರಿಯಾದ ಅಭ್ಯಾಸ ಯಾವುದು ಎಂಬುದರ ಕುರಿತು ಕೇಳುವುದರಿಂದ, ಓದುವುದರಿಂದ ಅಥವಾ ಕಲಿಯುವುದರಿಂದ ಅದರ ಬಗ್ಗೆ ತಿಳಿಯಬೇಕಾಗಿದೆ. ಈ ಹಂತದಲ್ಲಿ ನಾವು ಅದನ್ನು ಅರ್ಥಮಾಡಿಕೊಳ್ಳುವ ಅವಶ್ಯಕತೆಯಿರುವುದಿಲ್ಲ, ಆದರೆ ಇದೊಂದು ಬೌದ್ಧ ವಿಧಾನ ಎಂದು ನಮ್ಮಿಂದ ಗುರುತಿಸಲಾಗುತ್ತದೆ.  
  • ಅದರ ಅರ್ಥವನ್ನು ಆಲೋಚಿಸುವುದು - ನಾವು ಪಡೆದ ಮಾಹಿತಿಯನ್ನು ನಾವು ಪರಿಗಣಿಸಬೇಕು, ವಿವಿಧ ದೃಷ್ಟಿಕೋನಗಳಿಂದ ಯೋಚಿಸಬೇಕು ಮತ್ತು ವಿಶ್ಲೇಷಿಸಬೇಕು, ಇದರಿಂದ ನಾವು ಅದನ್ನು ಅರ್ಥಮಾಡಿಕೊಳ್ಳಬಹುದು. ನಾವು ಪರಿಗಣಿಸುತ್ತಿರುವುದು ಅಸಂಬದ್ಧವಲ್ಲ, ಬದಲಿಗೆ ನಿಜವಾದುದು ಎಂದು ನಮಗೆ ಅರಿವಾಗಬೇಕು. ಇದು ನಮಗೆ ಪ್ರಯೋಜನಕಾರಿಯಾಗಿರುವುದು ಮತ್ತು ಇದನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ಸಾಧ್ಯವಿದೆ ಎಂದು ನಮಗೆ ಮನವರಿಕೆಯಾಗಬೇಕು. 
  • ಧ್ಯಾನಿಸುವುದು - ಈಗ ನಾವು ಕಲಿತದ್ದನ್ನು ಮತ್ತು ಅರ್ಥಮಾಡಿಕೊಂಡದ್ದನ್ನು ಹೆಚ್ಚು ಪ್ರಯೋಜನಕಾರಿ ಅಭ್ಯಾಸವಾಗಿ ನಿರ್ಮಿಸುವಂತೆ ಧ್ಯಾನಿಸಲು ನಾವು ಸಿದ್ಧರಿದ್ದೇವೆ. 

ಸರಿಯಾದ ಮಾಹಿತಿ ಮತ್ತು ಚಿಂತನೆ 

ಸರಿಯಾದ ಮಾಹಿತಿಯನ್ನು ಪಡೆಯುವುದು ನಾವು ಅಂದುಕೊಂಡಷ್ಟು ಸುಲಭವಲ್ಲ. ಅಧಿಕೃತ ಬೌದ್ಧ ವಿಧಾನಗಳನ್ನು ಕಲಿಸುತ್ತೇವೆ ಎಂದು ಹೇಳಿಕೊಳ್ಳುವವರು ಬಹಳಷ್ಟಿದ್ದಾರೆ; ಆದರೆ ಒಂದು ಪುಸ್ತಕವನ್ನು ಬರೆದು, ಪ್ರಕಟಿಸಿದ ಮಾತ್ರಕ್ಕೆ, ಪುಸ್ತಕದಲ್ಲಿನ ವಿಷಯವು ಸರಿಯಾಗಿರುತ್ತದೆ ಎಂದು ಅರ್ಥವಲ್ಲ. ಒಬ್ಬ ಶಿಕ್ಷಕ ಬಹಳಾ ಜನಪ್ರಿಯರಾಗಿರಬಹುದು ಅಥವಾ ವರ್ಚಸ್ವಿಯಾಗಿರುವುದರಿಂದ, ಅವರು ಕಲಿಸುವುದೆಲ್ಲವೂ ಸರಿಯಾಗಿರುತ್ತದೆ ಎಂದು ಹೇಳಲಾಗುವುದಿಲ್ಲ. ಹಿಟ್ಲರ್ ಬಹಳ ವರ್ಚಸ್ವಿ ಮತ್ತು ಜನಪ್ರಿಯನಾಗಿದ್ದನು, ಆದರೆ ಅವನು ಬೋಧಿಸಿದ ವಿಷಯವು ಸರಿಯಾಗಿರಲಿಲ್ಲ. 

ಆದ್ದರಿಂದ, ಬೌದ್ಧಧರ್ಮದಲ್ಲಿ ನಾವು ನಮ್ಮ ಬುದ್ಧಿವಂತಿಕೆಯನ್ನು ಬಳಸುವಂತೆ ಒತ್ತಿಹೇಳಲಾಗುತ್ತದೆ. ಪ್ರಾಣಿಗಳಿಂದ ನಮ್ಮನ್ನು ಹೇಗೆ ಬೇರ್ಪಡಿಸಬಹುದು? ಒಂದು ಪ್ರಾಣಿಗೆ ಅನೇಕ ಕೆಲಸಗಳನ್ನು ಮಾಡಲು ತರಬೇತಿ ನೀಡಬಹುದು, ಆದರೆ ಅವುಗಳಿಗಿಂತ ಹೆಚ್ಚಾಗಿ ನಮ್ಮಲ್ಲಿ ಇರುವುದು ಬುದ್ಧಿಶಕ್ತಿ. ನಮಗೆ ಯಾವುದು ಸಹಾಯಕ ಮತ್ತು ಯಾವುದು ಅಲ್ಲ ಎಂಬುದರ ನಡುವಿನ ವ್ಯತ್ಯಾಸವನ್ನು ಗುರುತಿಸಲು ಸಾಧ್ಯವಾಗುತ್ತದೆ. ನಮಗೆ ಮೊದಲಿಗೆ ಏನಾದರೂ ಅರ್ಥಮಾಡಿಕೊಳ್ಳಲಾಗದಿದ್ದರೂ, ನಾವು ನಮ್ಮ ಬುದ್ಧಿವಂತಿಕೆಯನ್ನು ಬಳಸಿ ಏನು ಬೇಕಾದರೂ ಸಾಧಿಸಬಹುದು, ನಾವು ಬೋಧನೆಗಳನ್ನು ಕೇಳುವಾಗ ಅಥವಾ ಓದುವಾಗ ನಾವು ಮಾಡಬೇಕಾದದ್ದು ಇದೇ. 

ಬುದ್ಧ ಬೋಧಿಸಿದ ಪ್ರತಿಯೊಂದರ ಉದ್ದೇಶವು ಇತರರಿಗೆ ಪ್ರಯೋಜನಕಾರಿಯಾಗಿರುವುದಾಗಿದೆ. ಆದರೆ ಅವರು ಕಲಿಸಿದ ವಿಷಯಗಳು ನಮಗೆ ಪ್ರಯೋಜನಕಾರಿಯೇ ಅಥವಾ ಇಲ್ಲವೇ ಎಂಬುದನ್ನು ನಾವು ಪರಿಶೀಲಿಸಬಹುದು. ಇದಕ್ಕಾಗಿ, ನಾವು ದೀರ್ಘಕಾಲೀನ ಪರಿಣಾಮಗಳನ್ನು ಪರಿಗಣಿಸಬೇಕಾಗಿದೆ, ಏಕೆಂದರೆ ಅಲ್ಪಾವಧಿಯ ಪರಿಣಾಮಗಳು ಅಷ್ಟು ಆಹ್ಲಾದಕರವಾಗಿರುವುದಿಲ್ಲ. ಇದು ಕ್ಯಾನ್ಸರ್ಗಾಗಿ ಇರುವ ಕಿಮೊಥೆರಪಿಯಂತಹ ವೈದ್ಯಕೀಯ ಚಿಕಿತ್ಸೆಗಳಂತಿರುತ್ತದೆ, ಇದರ ಮೂಲಕ ಹಾದುಹೋಗಲು ಆಹ್ಲಾದಕರವಾಗಿರುವುದಿಲ್ಲವಾದರೂ, ಅದರಿಂದ ದೀರ್ಘಕಾಲೀನ ಪ್ರಯೋಜನವಾಗುತ್ತದೆ. 

ನಾವು ಈ ಮೇಲಿನಂತೆ, ಬೋಧನೆಯನ್ನು ಪರಿಶೀಲಿಸಿ ಮತ್ತು ಅದನ್ನು ನಮ್ಮ ಜೀವನ ಮತ್ತು ನಮ್ಮ ಸ್ವಂತ ಅನುಭವಕ್ಕೆ ಸಂಬಂಧಿಸದಿದ್ದರೆ, ನಾವು ಅದರ ಬಗ್ಗೆ ಪ್ರಾಮಾಣಿಕವಾಗಿ ಹೇಗೆ ತಾನೆ ಧ್ಯಾನಿಸಬಹುದು? ನಮಗೆ ಒಂದು ವಸ್ತುವಿನ ಅಗತ್ಯವಿದೆಯೇ ಇಲ್ಲವೇ, ಮತ್ತು ಅದು ನಿಜವಾಗಿಯೂ ಒಳ್ಳೆಯ ಗುಣಮಟ್ಟದ್ದೇ ಅಲ್ಲವೇ ಎಂಬುದರ ಬಗ್ಗೆ ಯೋಚಿಸದೇ ಅದನ್ನು ಖರೀದಿಸುವಂತೆ ಇದಾಗಿರುತ್ತದೆ. 

ಕ್ರಮಬದ್ಧವಾದ ಧ್ಯಾನದ ಅಭ್ಯಾಸ

ಬೋಧನೆಗಳ ಬಗ್ಗೆ ಯೋಚಿಸುವ ಪ್ರಕ್ರಿಯೆಯೇ ಸ್ವತಃ ಬಹಳಾ ಪ್ರಯೋಜನಕಾರಿಯಾಗಿದ್ದು, ಕೆಲವರು ಇದನ್ನು ಕೂಡ ಧ್ಯಾನದ ಒಂದು ರೂಪವಾಗಿ ಪರಿಗಣಿಸಬಹುದು. ಆದರೆ ಸಾಂಪ್ರದಾಯಿಕವಾಗಿ "ಧ್ಯಾನ" ಎಂದು ಕರೆಯಬಹುದಾದ ಪ್ರಕ್ರಿಯೆಯು, ಈ ಹೆಚ್ಚು ಪ್ರಯೋಜನಕಾರಿ ಮನಸ್ಥಿತಿಯನ್ನು, ನಮ್ಮ ಅಸ್ಥಿತ್ವದಲ್ಲಿ, ನಮ್ಮ ಸಾಮಾನ್ಯ ಜೀವನದಲ್ಲಿ ಸಂಯೋಜಿಸುವುದಾಗಿರುತ್ತದೆ. ಇದು ಸ್ವತಃ ಎರಡು ಹಂತಗಳನ್ನು ಒಳಗೊಂಡಿರುತ್ತದೆ: 

  • ವಿವೇಚನಾಶೀಲ ಧ್ಯಾನ – ಸಾಮಾನ್ಯವಾಗಿ, ಈ ಮೊದಲ ಹಂತವನ್ನು "ವಿಶ್ಲೇಷಣಾತ್ಮಕ ಧ್ಯಾನ" ಎಂದು ಕರೆಯಲಾಗುತ್ತದೆ ಮತ್ತು ಇಲ್ಲಿ ನಾವು ಸುಧಾರಿತ ಮನೋಭಾವದೊಂದಿಗೆ ಒಂದು ವಿಷಯದ ಮೇಲೆ ಕೇಂದ್ರಿಕರಿಸಿ, ಅದರ ಎಲ್ಲಾ ವಿವರಗಳನ್ನು ಮತ್ತು ಪೋಷಕ ಅಂಶಗಳನ್ನು ವಿವರವಾಗಿ ಗ್ರಹಿಸುತ್ತೇವೆ. 
  • ಸ್ಥಿರಗೊಳಿಸುವ ಧ್ಯಾನ - ಎರಡನೆಯ ಹಂತದಲ್ಲಿ ನಾವು ಎಲ್ಲಾ ವಿವರಗಳನ್ನು ಸಕ್ರಿಯವಾಗಿ ಗ್ರಹಿಸುವುದಿಲ್ಲ, ಬದಲಿಗೆ ನಮ್ಮ ವಿಶ್ಲೇಷಣೆಯ ಮುಖ್ಯ ತೀರ್ಮಾನವನ್ನು ನಮ್ಮ ವರ್ತನೆಯಾಗಿಸಿ, ನಮ್ಮ ವಿಷಯದ ಮೇಲೆ ಹೆಚ್ಚು ಸಂಕ್ಷಿಪ್ತವಾಗಿ ಗಮನಹರಿಸುತ್ತೇವೆ.

ಧ್ಯಾನವನ್ನು ಪ್ರಾರಂಭಿಸುವಾಗ, ಅನೇಕರು ಉಸಿರಾಟದ ಮೇಲೆ ಕೇಂದ್ರೀಕರಿಸಲು ಕಲಿಯುತ್ತಾರೆ. ನಾವು ನಮ್ಮ ಮನಸ್ಸನ್ನು ಶಾಂತಗೊಳಿಸುತ್ತೇವೆ ಮತ್ತು ಒಳಗೆ ಮತ್ತು ಹೊರಗೆ ಹೋಗುವ ಉಸಿರಾಟದ ಮೇಲೆ ಕೇಂದ್ರೀಕರಿಸುತ್ತೇವೆ. ಇದು ಸರಳವಾಗಿರುವಂತೆ ತೋರುತ್ತದೆ ಆದರೆ ವಾಸ್ತವದಲ್ಲಿ ನಂಬಲಾಗದಷ್ಟು ಕಷ್ಟವಾಗಿರುತ್ತದೆ. ನಾವು ಉಸಿರಾಟದ ಮೇಲೆ ಕೇಂದ್ರೀಕರಿಸಿದಾಗ ನಾವು ಏನು ಮಾಡಲು ಪ್ರಯತ್ನಿಸುತ್ತಿದ್ದೇವೆ? ಮೊದಲನೆಯದಾಗಿ, ಎಲ್ಲಾ ರೀತಿಯ ಗೊಂದಲದ ಭಾವನೆಗಳು ಮತ್ತು ತೋಚಿಕೆಗಳನ್ನು ಅಲೆದಾಡುವಂತೆ ಮಾಡುವ ನಮ್ಮ ಮನಸ್ಸಿನಲ್ಲಿರುವ ಧ್ವನಿಯನ್ನು ಶಾಂತಗೊಳಿಸಲು ನಾವು ಪ್ರಯತ್ನಿಸುತ್ತಿದ್ದೇವೆ. ಇದು ಹಿನ್ನೆಲೆಯಲ್ಲಿರುವ ಸ್ಥಿರತೆಯ ಶಬ್ಧವನ್ನು ತೊಡೆದುಹಾಕುವಂತಿರುತ್ತದೆ. ಆದರೆ ಅದೇ ಕ್ಷಣದಲ್ಲಿ, ನಾವು ಕೇಳಿದ, ಆಲೋಚಿಸಿದ ಮತ್ತು ಅರ್ಥಮಾಡಿಕೊಂಡ ಕೆಲವು ತಿಳುವಳಿಕೆಯೊಂದಿಗೆ, ನಾವು ಉಸಿರಾಟದ ಮೇಲೆ ಕೇಂದ್ರೀಕರಿಸಬಹುದು. ಈ ವಿಷಯದಲ್ಲಿಯೇ ವಿವೇಚನಾಶೀಲ ಮತ್ತು ಸ್ಥಿರಗೊಳಿಸುವ ಧ್ಯಾನದ ಅಭ್ಯಾಸಗಳು ಪಾತ್ರವಹಿಸುತ್ತವೆ. ಉದಾಹರಣೆಗೆ, ನಾವು ಉಸಿರನ್ನು ಅಶಾಶ್ವತತೆಯ ದೃಷ್ಟಾಂತವಾಗಿ ಪರಿಗಣಿಸಬಹುದು: ಇದು ಸಾರ್ವಕಾಲಿಕವಾಗಿ ಬದಲಾಗುತ್ತಿರುತ್ತದೆ. ಅಥವಾ ಉಸಿರಾಟದಿಂದ ಪ್ರತ್ಯೇಕವಾದ "ನಾನು" ಎಂಬುದು ಇಲ್ಲ ಎಂಬ ಅಂಶವನ್ನು ನಾವು ನೋಡಬಹುದು - ಅಂತಿಮವಾಗಿ, ಉಸಿರಾಡುತ್ತಿರುವವರು ಯಾರು? ಆದರೆ ಅಂತಹ ವಿಶ್ಲೇಷಣೆಯು, ಆರಂಭಿಕರಿಗಾಗಿ ಸ್ವಲ್ಪ ಜಟಿಲಗೊಳ್ಳಬಹುದು. 

ನಾವು ಪ್ರಾರಂಭಿಸಬಹುದಾದ ಉತ್ತಮ ಜಾಗವು, ನಮ್ಮನ್ನು ನಾವೇ ವಿಶ್ಲೇಷಿಸುವುದಾಗಿರುತ್ತದೆ. ಸಾಮಾನ್ಯವಾಗಿ, ನಮ್ಮ ಕೆಲಸ, ಕುಟುಂಬ, ಸಮಾಜದಿಂದ ನಾವು ಯಾವಾಗಲೂ ಹೆಚ್ಚಿನ ಒತ್ತಡದಲ್ಲಿರುತ್ತೇವೆ - ಆದ್ದರಿಂದ ನಮ್ಮ ಮನಸ್ಸು ಯಾವಾಗಲೂ ಚಿಂತೆ ಮತ್ತು ತೊಂದರೆ ಉಂಟುಮಾಡುವ ಆಲೋಚನೆಗಳೊಂದಿಗೆ ಓಡುತ್ತಿರುತ್ತದೆ. ವಿಶ್ರಾಂತಿಗೊಳ್ಳುವುದು ತುಂಬಾ ಕಷ್ಟ! ಆದ್ದರಿಂದ ನಮಗೆ, ಹೆಚ್ಚು ಶಾಂತವಾಗಿರುವುದು ಮತ್ತು ಹೆಚ್ಚು ಸ್ಥಾಪಿತಗೊಳ್ಳುವುದೇ ತುಂಬಾ ಪ್ರಯೋಜನಕಾರಿಯಾಗಿರುತ್ತದೆ. ಇದು ನಮ್ಮ ಸಮಸ್ಯೆಗಳನ್ನು ಪರಿಹರಿಸದಿದ್ದರೂ, ಇದು ರಚನಾತ್ಮಕವಾದ ಮೊದಲ ಹೆಜ್ಜೆಯಾಗಿರುತ್ತದೆ. ನಮ್ಮ ಉಸಿರಾಟದ ಮೇಲೆ ಕೇಂದ್ರೀಕರಿಸುವ ಮೂಲಕ, ನಾವು ನಮ್ಮ ದೇಹದ ವಾಸ್ತವದೊಂದಿಗೆ ಸಂಪರ್ಕ ಹೊಂದಬಹುದು - "ನಾನು ಜೀವಂತವಾಗಿದ್ದೇನೆ!" ಉಸಿರಾಟವು ಅದರ ಉತ್ತಮ ಸೂಚನೆಯಾಗಿರುತ್ತದೆ, ಏಕೆಂದರೆ ನಾವು ಸಾಯುವವರೆಗೂ ಅದು ಕಾರ್ಯಗತವಾಗಿರುತ್ತದೆ. ಜೀವನದಲ್ಲಿ ಎಷ್ಟೇ ಕಷ್ಟ ಬಂದರೂ ಉಸಿರು ಇದ್ದೇ ಇರುತ್ತದೆ. ನಾವು ಅದರ ಬಗ್ಗೆ ಹೆಚ್ಚು ಎಚ್ಚರದಿಂದಿದ್ದರೆ, ಜೀವನವು ಮುಂದೆ ಸಾಗುತ್ತದೆ ಎಂದು ಅರ್ಥಮಾಡಿಕೊಳ್ಳಲು ನಮಗೆ ಸಹಾಯ ಮಾಡುತ್ತದೆ; ಏನೇ ಆಗಲಿ, ಜೀವನ ಮುಂದೆ ಸಾಗುತ್ತದೆ. ನನ್ನ ಸ್ನೇಹಿತ ನಿಧನಗೊಂಡಾಗ, ನಾನು ಇದನ್ನೇ ಅರ್ಥಮಾಡಿಕೊಂಡೆ, ಇದು ಬಹಳಾ ಸಹಾಯಕವಾಗಿರುತ್ತದೆ - ಏನೇ ಆಗಲಿ, ಜೀವನವು ಮುಂದೆ ಸಾಗುತ್ತದೆ. 

ಈಗ ನಮ್ಮ ಬಳಿ ಈ ಮಾಹಿತಿಯಿದೆ, ನಾವು ಅದರ ಬಗ್ಗೆ ಯೋಚಿಸಿದ್ದೇವೆ ಮತ್ತು ಅರ್ಥಮಾಡಿಕೊಂಡಿದ್ದೇವೆ ಮತ್ತು ಅದು ಅರ್ಥಪೂರ್ಣವಾಗಿದೆ ಎಂದು ಮನವರಿಕೆಯಾಗಿದೆ. ಜೀವನವು ಮುಂದೆ ಸಾಗುತ್ತದೆ ಎಂಬುದನ್ನು ಗುರುತಿಸಿ, ನನ್ನ ದೇಹದೊಂದಿಗೆ ಹೆಚ್ಚು ಸಂಪರ್ಕ ಹೊಂದಲು ಮತ್ತು ನನ್ನ ಭಯಭೀತದ ಮತ್ತು ಖಿನ್ನತೆಯ ಆಲೋಚನೆಗಳಲ್ಲಿ ಸಂಪೂರ್ಣವಾಗಿ ಕಳೆದುಹೋಗದಿರುವುದು ಪ್ರಯೋಜನಕಾರಿಯಾಗಿರುತ್ತದೆಯೇ? ಹೌದು, ಇದರಿಂದ ಪ್ರಯೋಜನವಾಗುತ್ತದೆ. ನಾನು ಕೇಂದ್ರೀಕೃತವಾಗಿರಲು ಮತ್ತು ನನ್ನ ಉಸಿರಾಟದ ಬಗ್ಗೆ ಅರಿವಿಕೆಯಿಂದಿರುವ ಸಾಮರ್ಥ್ಯವನ್ನು ಹೊಂದಿದ್ದೇನೆಯೇ? ಹೌದು, ನಾವು ನಮ್ಮ ಇತರ ಚಟುವಟಿಕೆಗಳನ್ನು ಕೆಲವು ಕ್ಷಣಗಳ ಕಾಲ ವಿರಾಮಗೊಳಿಸಿದರೂ ಸಹ, ನಾವು ನಮ್ಮ ಉಸಿರಾಟವನ್ನು ಗಮನಿಸಬಹುದು: ಅದು ಯಾವಾಗಲೂ ಇರುತ್ತದೆ. ಹೀಗಾಗಿ, ನಮಗೆ ಬಹಳಾ ಗಹನವಾದ ಅಥವಾ ಅತ್ಯಾಧುನಿಕ ಮಟ್ಟದ ತಿಳುವಳಿಕೆಯಿರುವ ಅಗತ್ಯವಿಲ್ಲ. ಹೌದು, ಇದು ಗಹನವಾದಷ್ಟು ಉತ್ತಮವಾಗಿರುತ್ತದೆ, ಆದರೆ ಪ್ರಾರಂಭಿಸಲು ಇದು ಸಾಕು. 

ಧ್ಯಾನದ ಪ್ರಕ್ರಿಯೆ 

ನಮ್ಮ ಬಳಿ ಎರಡು ಮಾನಸಿಕ ಅಂಶಗಳಿರುವಾಗ, ಉಸಿರಾಟದ ಮೇಲೆ ಕೇಂದ್ರೀಕರಿಸುವ ತಿಳುವಳಿಕೆಯನ್ನು ಪಡೆಯುತ್ತೇವೆ, ಈ ಮಾನಸಿಕ ಸ್ಥಿತಿಗಳು ನಮ್ಮ ಗಮನದ ಜೊತೆಯಲ್ಲಿರುತ್ತವೆ: 

  • ಸಮಗ್ರ ಪತ್ತೆ ಹಚ್ಚುವಿಕೆ - ಸಾಧಾರಣ ಮಟ್ಟದಲ್ಲಿ ಏನನ್ನಾದರೂ ಗಮನಿಸುವುದು 
  • ಸೂಕ್ಷ್ಮ ವಿವೇಚನೆ - ಬಹಳ ವಿವರವಾದ ಮಟ್ಟದಲ್ಲಿ ಏನನ್ನಾದರೂ ಅರ್ಥಮಾಡಿಕೊಳ್ಳುವುದು. 

ಈ ಎರಡು ಮಾನಸಿಕ ಸ್ಥಿತಿಗಳ ನಡುವಿನ ವ್ಯತ್ಯಾಸವನ್ನು ವಿವರಿಸಲು ಬಳಸಲಾಗುವ ಸಾಂಪ್ರದಾಯಿಕ ಉದಾಹರಣೆಯು ಒಂದು ವರ್ಣಚಿತ್ರವನ್ನು ನೋಡುವುದಾಗಿರುತ್ತದೆ. ಸಮಗ್ರ ಪತ್ತೆ ಹಚ್ಚುವಿಕೆಯೊಂದಿಗೆ, ಇದು ಬಹುಶಃ ಕೆಲವು ಜನರಿರುವ ಚಿತ್ರಕಲೆ ಎಂದು ನಾವು ಗಮನಿಸಬಹುದು. ಇದನ್ನು ನಮ್ಮ ಮನಸ್ಸು ನಮಗೆ ಹೇಳಿ, ತಿಳುವಳಿಕೆ ನೀಡುವುದಿಲ್ಲ, ಬದಲಿಗೆ ಕೇವಲ ನೋಡುವುದರಿಂದಲೇ ನಮಗೆ ಗೊತ್ತಾಗುತ್ತದೆ. ಇದನ್ನೇ ನಾವು ಸಾಮಾನ್ಯ ಭಾಷೆಯಲ್ಲಿ "ತಿಳುವಳಿಕೆ" ಎಂದು ಕರೆಯುತ್ತೇವೆ. ಸೂಕ್ಷ್ಮ ವಿವೇಚನೆಯಿಂದ, ನಾವು ವರ್ಣಚಿತ್ರವನ್ನು ಹೆಚ್ಚು ಸೂಕ್ಷ್ಮವಾಗಿ ನೋಡುತ್ತೇವೆ ಮತ್ತು ಇದು ಕೆಲವು ವೈಶಿಷ್ಟ್ಯಗಳೊಂದಿಗಿರುವ ಆ ವ್ಯಕ್ತಿಯ ಅಥವಾ ಈ ವ್ಯಕ್ತಿಯ ಚಿತ್ರ ಎಂದು ಅರ್ಥಮಾಡಿಕೊಳ್ಳುತ್ತೇವೆ. 

ಉಸಿರಾಟದ ಮೇಲೆ ಕೇಂದ್ರೀಕರಿಸುವಾಗ ನಾವು ಈ ಮೇಲಿನದನ್ನೇ ಮಾಡುತ್ತೇವೆ. ಉಸಿರಾಟವು ಸಾರ್ವಕಾಲಿಕವಾಗಿ ನಡೆಯುವ ಸಂಗತಿಯಾಗಿದೆ ಎಂದು ನಾವು ಪತ್ತೆಹಚ್ಚುತ್ತೇವೆ ಮತ್ತು ಅರ್ಥಮಾಡಿಕೊಳ್ಳುತ್ತೇವೆ ಮತ್ತು ಅದು ಮೂಗಿನೊಳಗೆ ಮತ್ತು ಹೊರಗೆ ಹೋಗುವ ವಿವರವನ್ನು ನಾವು ಗ್ರಹಿಸುತ್ತೇವೆ. ಏನೇ ಆಗಲಿ, ನಾನು ಬದುಕಿರುವವರೆಗೂ ಅದು ನಡೆಯುತ್ತಿರುತ್ತದೆ, ಆ ಅರ್ಥದಲ್ಲಿ ಅದು ಸ್ಥಿರವಾಗಿದ್ದು, ಸುರಕ್ಷಿತವಾಗಿದ್ದು, ನಾವು ಅದನ್ನು ಅವಲಂಬಿಸಬಹುದಾಗಿದೆ. ಅದಕ್ಕಾಗಿಯೇ ನಾವು ಇದನ್ನು "ವಿವೇಚನಾಶೀಲ ಧ್ಯಾನ" ಎಂದು ಕರೆಯುತ್ತೇವೆ ಏಕೆಂದರೆ ಇದು ನಾವು ಸಕ್ರಿಯವಾಗಿ ಗಮನಿಸುವ ಸಂಗತಿಯಾಗಿದೆ. ನಾವು ಅದನ್ನು ವಿಶ್ಲೇಷಿಸುತ್ತಿಲ್ಲ, ಆದರೆ ಒಂದು ನಿರ್ದಿಷ್ಟ ದೃಷ್ಟಿಕೋನದಿಂದ ಅದನ್ನು ಒಂದು ನಿರ್ದಿಷ್ಟ ರೀತಿಯಲ್ಲಿ ನೋಡುತ್ತೇವೆ ಮತ್ತು ಅರ್ಥಮಾಡಿಕೊಳ್ಳುತ್ತೇವೆ. 

ಎರಡನೇ ಹಂತವಾದ, ಸ್ಥಿರಗೊಳಿಸುವ ಧ್ಯಾನದಲ್ಲಿ, ನಾವು ಈ ರೀತಿಯಾಗಿ ಸಕ್ರಿಯವಾಗಿ ವಿವೇಚಿಸುವ ಅಗತ್ಯವಿರುವುದಿಲ್ಲ, ನಮಗೆ ಅದು ತಿಳಿದಿರುತ್ತದೆ. ಏನನ್ನಾದರೂ ಸಕ್ರಿಯವಾಗಿ ಅರ್ಥಮಾಡಿಕೊಳ್ಳುವುದು ಮತ್ತು ಅದು ಮೊದಲೇ ಗೊತ್ತಿರುವುದರ ನಡುವೆ ವಿಭಿನ್ನ ಮನಸ್ಥಿತಿಯಿರುತ್ತದೆ. ನಾವು ಧ್ಯಾನಿಸುತ್ತೇವೆ ಮತ್ತು ಅದರ ಫಲಿತಾಂಶವೆಂದರೆ ನಾವು ಹೆಚ್ಚು ನೆಲೆಗೊಂಡಿದ್ದು, ಸ್ಥಿರ ಮತ್ತು ಸುರಕ್ಷಿತ ಭಾವನೆಯನ್ನು ಅನುಭವಿಸುತ್ತೇವೆ. ನಾವು ಮತ್ತೆ ಮತ್ತೆ, ಪ್ರತಿದಿನ ಅಭ್ಯಾಸ ಮಾಡಿದರೆ ಇದು ಸಂಭವಿಸುತ್ತದೆ. 

ದೈನಂದಿನ ಜೀವನದಲ್ಲಿ ನಮ್ಮ ಅಭ್ಯಾಸವನ್ನು ಅನ್ವಯಿಸುವುದು 

ವಿಶೇಷವಾಗಿ, ನಾವು ಹೆಚ್ಚಾಗಿ ಅಸಮಾಧಾನಗೊಂಡಾಗ, ಈ ಅಭ್ಯಾಸವನ್ನು ನೆನಪಿಟ್ಟುಕೊಳ್ಳಲು ಪ್ರಯತ್ನಿಸುತ್ತೇವೆ. ಸಹಜವಾಗಿ ಇದು ಕಷ್ಟವಾಗಿರುತ್ತದೆ, ಇದನ್ನು ಅರ್ಥೈಸಲು ನಾವು ಮೊದಲೇ ದೈಹಿಕ ತರಬೇತಿಯ ಸಾದೃಶ್ಯವನ್ನು ಬಳಸಿದ್ದೇವೆ - ಅಂತಿಮವಾಗಿ ತಿಳುವಳಿಕೆಯು ನಮ್ಮಲ್ಲಿ ಎಷ್ಟು ಆಳವಾಗಿ ಬೇರೂರುತ್ತದೆ ಎಂದರೆ ಅದು ನಮಗೆ ಸರ್ವಕಾಲಿಕವಾಗಿ ತಿಳಿದಿರುತ್ತದೆ. ಜೀವನವು ಮುಂದೆ ಸಾಗುತ್ತದೆ ಎಂದೂ ಮತ್ತು ಅತ್ಯಂತ ಆಳವಾದ ಮಟ್ಟದಲ್ಲಿ, ಏನೇ ಆದರೂ, ಅದರಿಂದ ಯಾವುದೇ ಸಮಸ್ಯೆ ಆಗುವುದಿಲ್ಲ ಎಂದು ನಮಗೆ ಯಾವಾಗಲೂ ತಿಳಿದಿರುತ್ತದೆ. ನಾವು ಇದನ್ನು ಎಷ್ಟು ಆಳವಾಗಿ ತಿಳಿದಿರುತ್ತೇವೆ ಎಂದರೆ ಅದು ನಾವು ಜೀವನವನ್ನು ನೋಡುವ ವಿಧಾನವನ್ನು ಬದಲಾಯಿಸುವ ಅಭ್ಯಾಸವಾಗುತ್ತದೆ. ಇದು ಧ್ಯಾನದ ಫಲಿತಾಂಶವಾಗಿರುತ್ತದೆ. ಅದನ್ನು ಮರೆತಲ್ಲಿ, ನಾವು ನಮ್ಮ ಉಸಿರಾಟದ ಮೇಲೆ ಕೇಂದ್ರೀಕರಿಸುವ ಮೂಲಕ ಅದನ್ನು ಯಾವಾಗಲೂ ನೆನಪಿಸಿಕೊಳ್ಳಬಹುದು ಮತ್ತು ನವೀಕರಿಸಬಹುದು. ನಾವು ದಿನನಿತ್ಯದ ಜೀವನದಲ್ಲಿ ಹೇಗೆ ವ್ಯವಹರಿಸುತ್ತೇವೆ ಎನ್ನುವ ವಿಷಯದಲ್ಲಿ, ನಮ್ಮ ಮನಸ್ಥಿತಿಗಳಲ್ಲಿ ಪ್ರಾಮಾಣಿಕವಾದ ಬದಲಾವಣೆಯನ್ನು ತರುತ್ತೇವೆ. ಇದು ಯಾವುದೋ ಕಾಲ್ಪನಿಕ ಲೋಕಕ್ಕೆ ಹೊರಟುಹೋಗುವುದರಿಂದ ನಮ್ಮ ಸಮಸ್ಯೆಗಳಿಂದ ತಪ್ಪಿಸಿಕೊಳ್ಳುವುದಾಗಿರುವುದಿಲ್ಲ, ಬದಲಿಗೆ ನಮ್ಮ ಮಾನಸಿಕ ಮತ್ತು ಭಾವನಾತ್ಮಕ ಸ್ಥಿತಿಗಳನ್ನು ಸುಧಾರಿಸಲು ಮತ್ತು ಅಂತಿಮವಾಗಿ, ನಾವು ಕಂಡುಕೊಳ್ಳುವ ಸನ್ನಿವೇಶಗಳನ್ನು ಸುಧಾರಿಸಲು, ನಾವು ಅನುಸರಿಸುವ ಸಕ್ರಿಯ ಪ್ರಕ್ರಿಯೆಯಾಗಿರುತ್ತದೆ. 

ನಾವು ಇಲ್ಲಿಯವರೆಗೆ ಮಾತನಾಡಿದ ವಿಷಯಗಳು, ಮನೋವಿಜ್ಞಾನದ ಅತ್ಯಂತ ಅತ್ಯಾಧುನಿಕವಾದ ವಿಧಾನಗಳಾಗಿಯೂ ಕಾಣಬಹುದು. ಇದನ್ನು ಈ ರೀತಿಯಾಗಿ ನೋಡುವುದರಲ್ಲಿ ತಪ್ಪೇನಿಲ್ಲ, ಆದರೆ ಬೌದ್ಧಧರ್ಮವು ಕೇವಲ ಮನೋವಿಜ್ಞಾನದ ಮತ್ತೊಂದು ರೂಪವಾಗಿದೆ ಎಂದು ಯೋಚಿಸದಂತೆ ನಾವು ಜಾಗರೂಕರಾಗಿರಬೇಕು. ಬೌದ್ಧಧರ್ಮವು ಇದಕ್ಕಿಂತ ಹೆಚ್ಚಿನದ್ದನ್ನು ಒಳಗೊಂಡಿರುತ್ತದೆ. ಬೌದ್ಧಧರ್ಮದಲ್ಲಿ ನಾವು ಇದಕ್ಕಿಂತ ಉನ್ನತ ಗುರಿಯನ್ನು ಹೊಂದಿರುತ್ತೇವೆ - ಜ್ಞಾನೋದಯ, ಎಲ್ಲರಿಗೂ ಸಹಾಯ ಮಾಡುವುದು - ಆದರೆ ನಾವು ಅತ್ಯಂತ ಪ್ರಮುಖವಾದ ಈ ಮೊದಲ ಹೆಜ್ಜೆಯ ಮೂಲಕ ಹಾದುಹೋಗಬೇಕಾಗಿದೆ. 

ಸಾರಾಂಶ 

ದಿನವಿಡೀ ಸಂಗೀತವನ್ನು ಕೇಳುವುದರಿಂದ ಅಥವಾ ನಿರಂತರವಾಗಿ ಕಾರ್ಯನಿರತರಾಗಿರುವುದರಿಂದ, ಎಲ್ಲವನ್ನೂ ಮರೆತುಬಿಡಲು ಮದ್ಯಪಾನ ಸೇವಿಸುವುದರಿಂದ ನಮ್ಮ ಸಮಸ್ಯೆಗಳನ್ನು ತಪ್ಪಿಸಿಕೊಳ್ಳಲು ಪ್ರಯತ್ನಿಸುವುದು ತುಂಬಾ ಸುಲಭ. ಈ ತಾತ್ಕಾಲಿಕ ಕ್ರಮಗಳು ಎಂದಿಗೂ ಹೆಚ್ಚಾಗಿ ಸಹಾಯ ಮಾಡುವುದಿಲ್ಲ ಮತ್ತು ಸಮಸ್ಯೆಗಳು ಮತ್ತೆ ಮತ್ತೆ ಕಾಣಿಸಿಕೊಳ್ಳುತ್ತಲೇ ಇರುತ್ತವೆ. ಪ್ರಾಮಾಣಿಕವಾಗಿ ಆಲೋಚಿಸುವ ಮೂಲಕ ಮತ್ತು ನಂತರ ಧರ್ಮವನ್ನು ಧ್ಯಾನಿಸುವ ಮೂಲಕ, ನಾವು ನಮ್ಮನ್ನು, ಇತರರನ್ನು ಮತ್ತು ನಾವು ಹಾದುಹೋಗುವ ಅನುಭವಗಳನ್ನು ನೋಡುವ ವಿಧಾನವನ್ನು ಸಂಪೂರ್ಣವಾಗಿ ಪರಿವರ್ತಿಸಲು ಸಾಧ್ಯವಾಗುತ್ತದೆ. ಇದರಿಂದ ನಮ್ಮ ಎಲ್ಲಾ ಸಮಸ್ಯೆಗಳು ತಕ್ಷಣವೇ ಮಾಯವಾಗುವುದಿಲ್ಲವಾದರೂ, ನಾವು ಅವುಗಳನ್ನು ಎದುರಿಸಲು ಸಾಕಷ್ಟು ಸಮರ್ಥರಾಗಿದ್ದೇವೆ ಎಂಬ ಜ್ಞಾನದಿಂದ, ಅವುಗಳನ್ನು ಎದುರಿಸಲು ಇದು ನಮಗೆ ಅನುವು ಮಾಡಿಕೊಡುತ್ತದೆ. 

Top