Study buddhism what is meditation

ಧ್ಯಾನವು ಮನಸ್ಸಿನ ಪ್ರಯೋಜನಕಾರಿ ಸ್ಥಿತಿಗಳನ್ನು ಅಭಿವೃದ್ಧಿಪಡಿಸುವ ಒಂದು ವಿಧಾನವಾಗಿದೆ. ಅದು ನಿಯತ ಕ್ರಮವಾಗುವವರೆಗೆ, ನಾವು ಕೆಲವು ಮಾನಸಿಕ ಸ್ಥಿತಿಗಳನ್ನು ಪುನರಾವರ್ತಿಸಬೇಕಾಗಿದೆ. ಭೌತಿಕವಾಗಿ, ಧ್ಯಾನವು ಹೊಸ ನರ ಮಾರ್ಗಗಳನ್ನು ನಿರ್ಮಿಸುತ್ತದೆ ಎಂದು ಕಂಡುಹಿಡಿಯಲಾಗಿದೆ. 

ಧ್ಯಾನದ ಪ್ರಯೋಜನಗಳು 

ಧ್ಯಾನದ ಮೂಲಕ, ನಾವು ಅಭಿವೃದ್ಧಿಪಡಿಸಬಹುದಾದ ಹಲವಾರು ಪ್ರಯೋಜನಕಾರಿ ಮನಸ್ಥಿತಿಗಳಿವೆ: 

  • ಹೆಚ್ಚು ನೆಮ್ಮದಿಯಿಂದಿರುವುದು ಮತ್ತು ಕಡಿಮೆ ಒತ್ತಡವನ್ನು ಎದುರಿಸುವುದು 
  • ಹೆಚ್ಚು ಗಮನಹರಿಸುವುದು ಮತ್ತು ವಿಚಲಿತಗೊಳ್ಳುವುದನ್ನು ಕಡಿಮೆ ಮಾಡುವುದು 
  • ನಿರಂತರ ಚಿಂತೆಗಳಿಂದ ಮುಕ್ತವಾಗಿ ಶಾಂತವಾಗಿರುವುದು
  • ನಮ್ಮ ಬಗ್ಗೆ ಮತ್ತು ನಮ್ಮ ಜೀವನದ ಮತ್ತು ಇತರರ ಬಗ್ಗೆ ಉತ್ತಮ ತಿಳುವಳಿಕೆಯನ್ನು ಹೊಂದಿರುವುದು 
  • ಪ್ರೀತಿ ಮತ್ತು ಸಹಾನುಭೂತಿಯಂತಹ ಸಕಾರಾತ್ಮಕ ಭಾವನೆಗಳನ್ನು ಹೆಚ್ಚಾಗಿ ಬೆಳೆಸಿಕೊಳ್ಳುವುದು. 

ನಾವೆಲ್ಲರೂ ಶಾಂತ, ಸ್ಪಷ್ಟ, ಸಂತೋಷದ ಮನಸ್ಸನ್ನು ಬಯಸುತ್ತೇವೆ. ನಾವು ಒತ್ತಡಕ್ಕೊಳಗಾಗಿದ್ದರೆ ಅಥವಾ ನಕಾರಾತ್ಮಕ ಸ್ಥಿತಿಯಲ್ಲಿದ್ದರೆ, ಅದು ನಮ್ಮನ್ನು ಅತೃಪ್ತಗೊಳಿಸುತ್ತದೆ. ಇದು ನಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಮತ್ತು ನಮ್ಮ ವೃತ್ತಿ, ಕುಟುಂಬ ಜೀವನ ಮತ್ತು ಗೆಳೆತನಗಳನ್ನು ಹಾಳುಮಾಡುತ್ತದೆ. 

ನಾವು ಒತ್ತಡದಿಂದ ಮತ್ತು ಸಿಡುಕುತನದಿಂದ ಬೇಸರಗೊಂಡಿದ್ದರೆ, ಧ್ಯಾನದಂತಹ ಅಭ್ಯಾಸಗಳು ನಮಗೆ ಸಹಾಯಮಾಡಬಹುದು. ಯಾವುದೇ ನಕಾರಾತ್ಮಕ ಅಡ್ಡಪರಿಣಾಮಗಳಿಲ್ಲದೆ, ಭಾವನಾತ್ಮಕ ನ್ಯೂನತೆಗಳನ್ನು ನಿವಾರಿಸಲು ಧ್ಯಾನವು ನಮಗೆ ಅನುವು ಮಾಡಿಕೊಡುತ್ತದೆ. 

ನಮಗೆ ಧ್ಯಾನದ ಬಗ್ಗೆ ವಾಸ್ತವಿಕವಾದ ಅರಿವಿರಬೇಕು. ಇದು ಸಕಾರಾತ್ಮಕ ಫಲಿತಾಂಶಗಳನ್ನು ಸಾಧಿಸಲು ನಾವು ಬಳಸಬಹುದಾದ ಸಾಧನವಾಗಿದೆ, ಆದರೆ ಇದು ಎಲ್ಲದರ ತ್ವರಿತ ಚಿಕಿತ್ಸೆ ಆಗಿರುವುದಿಲ್ಲ. ಒಂದೇ ಸಾಧನದಿಂದ ಎಲ್ಲಾ ಫಲಿತಾಂಶವನ್ನು ಸಾಧಿಸಲಾಗುವುದಿಲ್ಲ, ನಮಗೆ ಹಲವಾರು ಕಾರಣಗಳು ಮತ್ತು ಷರತ್ತುಗಳು ಬೇಕಾಗಿರುತ್ತವೆ. ಉದಾಹರಣೆಗೆ, ನಾವು ಅಧಿಕವಾದ ರಕ್ತದೊತ್ತಡದಿಂದ ಬಳಲುತ್ತಿದ್ದರೆ, ಧ್ಯಾನವು ಖಂಡಿತವಾಗಿಯೂ ನಮಗೆ ಸಹಾಯ ಮಾಡುತ್ತದೆ, ಆದರೆ ನಾವು ನಮ್ಮ ಆಹಾರಕ್ರಮವನ್ನು ಬದಲಾಯಿಸದಿದ್ದರೆ, ವ್ಯಾಯಾಮ ಮತ್ತು ಔಷಧಿಗಳನ್ನು ತೆಗೆದುಕೊಳ್ಳದಿದ್ದರೆ, ನಮಗೆ ಬೇಕಾದ ಫಲಿತಾಂಶಗಳು ಸಿಗುವುದಿಲ್ಲ. 

ಬೌದ್ಧ ಧ್ಯಾನದ ವಿಧಗಳು 

ಧ್ಯಾನ ಮಾಡಲು ಹಲವು ಮಾರ್ಗಗಳಿವೆ, ಅವೆಲ್ಲವೂ ನಮ್ಮನ್ನು ಶಾಂತಗೊಳಿಸಲು ಸಹಾಯ ಮಾಡಿದರೂ, ಅದು ಅವುಗಳ ಅಂತಿಮ ಗುರಿಯಾಗಿರುವುದಿಲ್ಲ. ಆದರೆ ಸಕಾರಾತ್ಮಕ ಸ್ಥಿತಿಗಳನ್ನು ನಿರ್ಮಿಸುವಲ್ಲಿ ನಾವು ನಿಜವಾದ ಪ್ರಗತಿಯನ್ನು ಸಾಧಿಸುವ ಮೊದಲು, ನಮ್ಮ ಒತ್ತಡವನ್ನು ಹೋಗಲಾಡಿಸುವುದು ಖಂಡಿತವಾಗಿಯೂ ಅವಶ್ಯಕವಾಗಿದೆ - ಆದ್ದರಿಂದ ನಾವು ಉಸಿರಾಟದ ಮೇಲೆ ಕೇಂದ್ರೀಕರಿಸುವ ಮೂಲಕ ನಮ್ಮ ಮನಸ್ಸನ್ನು ಶಾಂತಗೊಳಿಸಿದ ನಂತರವೇ ನಾವು ಎರಡು ರೀತಿಯ ಬೌದ್ಧ ಧ್ಯಾನಗಳಾದ ವಿವೇಚನೆ ಮತ್ತು ಸ್ಥಿರೀಕರಣದ ಮಧ್ಯೆ ಪರ್ಯಾಯವಾಗಿ ಮುಂದುವರಿಯುತ್ತೇವೆ. 

ವಿವೇಚನಾಶೀಲ ಧ್ಯಾನವನ್ನು ಸಾಮಾನ್ಯವಾಗಿ "ವಿಶ್ಲೇಷಣಾತ್ಮಕ" ಎಂದು ಕರೆಯಲ್ಪಟ್ಟಿದ್ದು, ನಾವು ಪ್ರೀತಿಯಂತಹ ಸಕಾರಾತ್ಮಕ ಮನಸ್ಸಿನ ಸ್ಥಿತಿಯತ್ತ ಹಂತ ಹಂತವಾಗಿ ಬೆಳೆಯಲು, ತಾರ್ಕಿಕತೆಯನ್ನು ಬಳಸುತ್ತೇವೆ. ಅಥವಾ ನಾವು ತಾರ್ಕಿಕತೆಯನ್ನು ಬಳಸಿ, ಪರಿಸ್ಥಿತಿಯನ್ನು ವಿಶ್ಲೇಷಿಸುತ್ತೇವೆ ಮತ್ತು ಅದರ ಬಗ್ಗೆ ಸರಿಯಾದ ತಿಳುವಳಿಕೆಯನ್ನು ಪಡೆಯಲು ಉಪಯೋಗಿಸುತ್ತೇವೆ, ಉದಾಹರಣೆಗೆ, ಅದರ ಅಶಾಶ್ವತೆಯ ಬಗ್ಗೆ ತಿಳಿಯಲು ಉಪಯೋಗಿಸಬಹುದು. ಅಥವಾ ಬುದ್ಧನ ರೂಪದಂತಹ ಸಕಾರಾತ್ಮಕ ಗುಣಗಳಿರುವ ಒಂದು ಮಾನಸಿಕ ಚಿತ್ರಣವನ್ನು ನಾವು ನಿರ್ಮಿಸಿ, ಅದನ್ನು ಸ್ಪಷ್ಟವಾಗಿ ಗ್ರಹಿಸಲು ಪ್ರಯತ್ನಿಸಬಹುದು. 

ನಂತರ, ಸ್ಥಿರಗೊಳಿಸುವ ಧ್ಯಾನದಲ್ಲಿ, ನಾವು ರಚಿಸಿದ ಸಕಾರಾತ್ಮಕ ಸ್ಥಿತಿಯನ್ನು ದೀರ್ಘಕಾಲ ಕಾಪಾಡಿಕೊಳ್ಳಲು ನಾವು ಸಾವಧಾನತೆ, ಗಮನ ಮತ್ತು ಏಕಾಗ್ರತೆಯನ್ನು ಬಳಸುತ್ತೇವೆ. ಅಥವಾ ನಾವು ನಿರ್ಮಿಸಿದ ಮಾನಸಿಕ ಚಿತ್ರದ ಮೇಲೆ ವಿಚಲಿತರಾಗದ ಗಮನವನ್ನು ಕಾಪಾಡಿಕೊಳ್ಳಲು ನಾವು ಆ ಸಾಧನಗಳನ್ನು ಅನ್ವಯಿಸುತ್ತೇವೆ. 

ಈ ಎರಡು ರೀತಿಯ ಧ್ಯಾನವನ್ನು ನಾವು ಪರ್ಯಾಯವಾಗಿ ಬಳಸುತ್ತೇವೆ. ನಾವು ನಿರ್ಮಿಸಿದಾಗ ಮತ್ತು ನಾವು ಬಯಸಿದ ಸಕಾರಾತ್ಮಕ ಮನಸ್ಥಿತಿಯನ್ನು ಗ್ರಹಿಸಿದಾಗ, ನಾವು ಅದನ್ನು ಸ್ಥಿರಗೊಳಿಸುತ್ತೇವೆ; ಮತ್ತು ಈ ಸ್ಥಿತಿಯ ಮೇಲೆ ನಮ್ಮ ಏಕಾಗ್ರತೆಯು ದುರ್ಬಲಗೊಂಡಾಗ ಅಥವಾ ಕಳೆದುಹೋದಾಗ, ಅದನ್ನು ಮತ್ತೊಮ್ಮೆ ನಿರ್ಮಿಸಲು ಮತ್ತು ವಿವೇಚಿಸಲು ನಾವು ಕಾರ್ಯ ನಿರ್ವಹಿಸುತ್ತೇವೆ. 

ದೈನಂದಿನ ಜೀವನಕ್ಕಾಗಿ ಧ್ಯಾನ 

ಕೇವಲ ನಮ್ಮ ಮನೆಯಲ್ಲಿನ ಆರಾಮದಾಯಕ ಆಸನದಲ್ಲಿ ಕುಳಿತು ಶಾಂತಿ, ಗಮನ ಮತ್ತು ಪ್ರೀತಿಯನ್ನು ಅನುಭವಿಸುವುದು ಧ್ಯಾನದ ಪ್ರಮುಖ ಉದ್ದೇಶವಾಗಿರುವುದಿಲ್ಲ, ಬದಲಿಗೆ ನಮ್ಮ ದೈನಂದಿನ ಜೀವನದ ಮೇಲೆ ಪರಿಣಾಮ ಬೀರುವುದಾಗಿರುತ್ತದೆ. ನಾವು ನಿಯಮಿತವಾಗಿ ಧ್ಯಾನ ಮಾಡಿದರೆ, ಅದು ಸಕಾರಾತ್ಮಕ ಭಾವನೆಗಳ ರೂಢಿಯನ್ನು ಬೆಳೆಸುತ್ತದೆ, ಅದನ್ನು ನಾವು ಹಗಲು - ರಾತ್ರಿ, ಯಾವಾಗ ಬೇಕಾದರೂ ಅನ್ವಯಿಸಬಹುದು. ಅಂತಿಮವಾಗಿ, ಅದು ನಮ್ಮ ಭಾಗವಾಗುತ್ತದೆ - ಅಂದರೆ ಸರಾಗವಾಗಿ ಪ್ರೀತಿಸುವುದು, ಕೇಂದ್ರೀಕೃತವಾಗಿರುವುದು ಮತ್ತು ಶಾಂತವಾಗಿರುವುದು ನಮಗೆ ಸ್ವಾಭಾವಿಕವಾಗಿರುತ್ತದೆ. 

ನಾವು ತೀವ್ರವಾಗಿ ಕೋಪಗೊಂಡ ಮತ್ತು ಹತಾಶೆಗೊಂಡ ಕ್ಷಣಗಳನ್ನು ಅನುಭವಿಸಬಹುದು, ಆದರೆ ಆ ಕ್ಷಣಗಳಲ್ಲಿ ನಾವು ಇದನ್ನು ನೆನಪಿಸಿಕೊಳ್ಳಬೇಕಾಗಿದೆ: "ಹೆಚ್ಚು ಪ್ರೀತಿಯಿಂದಿರಬೇಕು." ಸ್ಥಿರವಾದ ಧ್ಯಾನದ ಅಭ್ಯಾಸದ ಮೂಲಕ ನಾವು ಈ ಮನಸ್ಥಿತಿಯೊಂದಿಗೆ ಪರಿಚಿತರಾಗಿರುವುದರಿಂದ, ನಾವು ಅದನ್ನು ತಕ್ಷಣವೇ ರಚಿಸಬಹುದು. 

ನಮ್ಮಲ್ಲಿ ಯಾರೂ ಪರಿಪೂರ್ಣರಲ್ಲ, ನಮ್ಮೆಲ್ಲರಲ್ಲೂ ಒಂದು ರೀತಿಯ ಕೆಟ್ಟ ಅಭ್ಯಾಸಗಳಿದ್ದು, ಅವುಗಳನ್ನು ತೊರೆಯುವ ಬಯಕೆಯಿರುತ್ತದೆ. ಅದೃಷ್ಟವಶಾತ್, ಈ ಅಭ್ಯಾಸಗಳು ಶಾಶ್ವತವಾಗಿರುವುದಿಲ್ಲ, ಅವುಗಳನ್ನು ಬದಲಾಯಿಸಬಹುದು. 

ಈ ಬದಲಾವಣೆಗೆ ಬೇಕಾಗಿರುವುದು ನಮ್ಮ ಪ್ರಯತ್ನವೇ ಹೊರತು ಬೇರೇನೂ ಅಲ್ಲ. ನಮ್ಮಲ್ಲಿ ಹಲವರು, ಜಿಮ್‌ನಲ್ಲಿ ಗಂಟೆಗಟ್ಟಲೆ ಕಾಲ ಕಳೆಯುತ್ತೇವೆ ಆದರೆ ನಮ್ಮ ಅತ್ಯಂತ ಮೌಲ್ಯವಾದ ವಸ್ತುವನ್ನು ಅಭ್ಯಸಿಸಲು ಮರೆಯುತ್ತೇವೆ: ನಮ್ಮ ಚಿತ್ತ/ಮನಸ್ಸು. ಪ್ರಾರಂಭದಲ್ಲಿ ಇದು ಕಷ್ಟಕರವೆನಿಸಬಹುದು, ಆದರೆ ಧ್ಯಾನದಿಂದ ನಮ್ಮ ಜೀವನಕ್ಕಾಗುವ ಪ್ರಯೋಜನಗಳನ್ನು ಒಮ್ಮೆ ಗುರುತಿಸಿದಾಗ, ನಾವು ಸಂತೋಷದಿಂದ ನಮ್ಮ ಮನಸ್ಸಿನ ಮೇಲೆ ಕೆಲಸ ಮಾಡಲು ಸಮಯವನ್ನು ಮೀಸಲಿಡುತ್ತೇವೆ. 

Top